Thursday, August 6, 2020

ಕೋವಿಡ್ -19 ಸೋಂಕು ಹರಡುವಿಕೆ ಸಂದರ್ಭದಲ್ಲಿ ಮನೆಯಲ್ಲಿಯೇ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳುವ ಕುರಿತ ಲೇಖನ

2020-21ನೇ ಶೈಕ್ಷಣಿಕ ಸಾಲಿನಲ್ಲಿ ಕೋವಿಡ್ - 19 ಎಂಬ ವೈರಸ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ನಮಗೆ ಮನೆಯಿಂದಲೇ ಕೆಲಸ ಮಾಡಲು ಇಲಾಖೆ ಅನುಕೂಲಮಾಡಿಕೊಟ್ಟಿರುವುದರಿಂದ ಮುಂದಿನ ತರಗತಿಯಲ್ಲಿ ನಾವು ಇನ್ನೂ ಹೆಚ್ಚಿನ ಪರಿಣಾಮಿಕಾರಿಯಾಗಿ ಪಾಠವನ್ನು ಮಾಡುವ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ.

ಶಿಕ್ಷಣವು ನಿಂತ ನೀರಲ್ಲ ಸದಾ ಹೊಸತನ್ನು ಹೇಳುತ್ತಲೇ ಇರುತ್ತದೆ.  ಆದ್ದರಿಂದ ಶಿಕ್ಷಕರು ಸದಾ ಕ್ರಿಯಾಶೀಲ ವಿದ್ಯಾರ್ಥಿಗಳಾಗಿ ಅಭ್ಯಾಸ ಮಾಡುತ್ತಲೇ ಇರಬೇಕು.  ಆಗ ಮಾತ್ರ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಲು ಸಾಧ್ಯ.

ದೀಪ ತಾನು ಉರಿಯುತ್ತಿದ್ದರೆ ಮಾತ್ರ ಬೇರೆ ದೀಪ ಬೆಳಗುವಂತೆ ಶಿಕ್ಷಕರು ಸದಾ ಓದುತ್ತಿದ್ದರೆ ಮಾತ್ರ ವಿಷಯ ಜ್ಞಾನ ಪಡೆದು ಬೋಧಿಸಲು ಸಾದ್ಯ.  ವಿಷಯಕ್ಕೆ ಪೂರಕವಾಗಿ ದಿನಪತ್ರಿಕೆ. ಟಿ.ವಿ. ಮೋಬೈಲ್ ಮೂಲಕ ಮಾಹಿತಿಯನ್ನು ತಿಳಿಯಬಹುದಾಗಿದೆ.

ಶಿಕ್ಷಕರು ತಂತ್ರಜ್ಞಾನವನ್ನು ಬಳಸಿ ಬೋಧನೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳನ್ನು ಶಾಲೆಯ ಕಡೆ ಆಕರ್ಷಣೆಗೊಳಿಸಿದೆ.  ಇನ್ನೊಂದು ಆಯಾಮದಲ್ಲಿ ಹೇಳುವುದಾದರೆ ಹಲವಾರು ಶಿಕ್ಷಕರು ಇಂತಹ ತಂತ್ರಜ್ಞಾನದ ಕಲಿಕಾ ವಾತಾವರಣಕ್ಕೆ ಹೊಂದಾಣಿಕೆ ಮಾಡಿಕೊಂಡು ಮಕ್ಕಳಿಗೆ ಬೋಧಿಸುವಲ್ಲಿ ತೊಡಗಿದ್ದಾರೆ.  ಎಲ್ಲಾ ಮಕ್ಕಳ ಏಕಾಗ್ರತೆಯನ್ನು ಆಸಕ್ತಿಯನ್ನು ಬೆಳೆಸಲು ತಂತ್ರಜ್ಞಾನ ಸಹಾಯಕವಾಗಿದೆ.

ಇಂದು ಕೋವಿಡ್-19 ವೈರಸ್ ಪ್ರಪಂಚವನ್ನೇ ಬಾಧಿಸುತ್ತಿರುವ ಸಂದರ್ಭದಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆ ಮುನ್ನಡೆಸುವುದು ಸವಾಲಾಗಿದೆ.  ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಲು ಕೆಳಕಂಡ ವಿಧಾನಗಳನ್ನು ಅನುಸರಿಸಬೇಕು.

v ತಂತ್ರಜ್ಞಾನಾಧಾರಿತ ಶಿಕ್ಷಣ ಕಲಿಕೆ : ಯೂಟ್ಯೂಬ್, ಗೂಗಲ್ ಇತರೆ ಅಂತರ್ಜಾಲ ತಾಣಗಳ ಮೂಲಕ ಶಿಕ್ಷಕರು ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಬೋಧನೆಯನ್ನು ಪರಿಣಾಮಿಕಾರಿಯಾಗಿ ಬೋಧಿಸಲು ನೆರವಾಗುತ್ತದೆ.  ಆಧುನಿಕ ತಂತ್ರಜ್ಞಾನವನ್ನು ಬಳಸಿ ತರಗತಿ ಕಲಿಕೆಯನ್ನು ಹೆಚ್ಚು ಪರಿಣಾಮಿಕಾರಿಯಾಗಿ ಮಾಡಲು ಸಾಧ್ಯ.

v ಆನ್ಲೈನ್ ತರಬೇತಿ : ಇಲಾಖೆವತಿಯಿಂದ ನಡೆಯುವ ಆನ್ಲೈನ್ ತರಬೇತಿಗಳ ಮೂಲಕ ಶಿಕ್ಷಕರು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು.  ದೂರದಿಂದಲೇ ಅನೇಕ ಶಿಕ್ಷಕರಿಗೆ ಏಕಕಾಲದಲ್ಲಿ ಆನ್ಲೈನ್ ತರಬೇತಿ ಸುರಕ್ಷತೆ ದೃಷ್ಟಿಯಿಂದ ತುಂಬಾ ಉತ್ತಮವಾದ ಮಾರ್ಗವಾಗಿದೆ.  ನಾವು ತರಬೇತಿಯಿಂದ ಉತ್ತಮವಾದ ಮಾಹಿತಿಯನ್ನು ಪಡೆದಿದ್ದೇವೆ.

v ಪಾಠೋಪಕರಣಗಳ ತಯಾರಿಕೆ : ಮಕ್ಕಳಿಗೆ ಆಸಕ್ತಿಯದಾಯಕ ಕಲಿಕೆಗೆ ಪೂರಕವಾಗಿ ಶಿಕ್ಷಕರ ಬೋಧನೆಯನ್ನು ಯಶಸ್ವಿಗೊಳಿಸಲು ಅನೇಕ ಪಾಠೋಪಕರಣಗಳ ಅವಶ್ಯಕತೆಯಿದೆ.  ನೂರು ಮಾತುಗಳನ್ನು ಒಂದು ಚಿತ್ರಪಟ ಹೇಳುತ್ತದೆ.  ಆದ್ದರಿಂದ ತರಗತಿಯಲ್ಲಿ ನೈಜ ಅನುಭವಗಳನ್ನು ನೀಡಲು ಪಾಠೋಪಕರಣ ಮತ್ತು ಕಲಿಕೋಪಕರಣಗಳು ಬೇಕಾಗಿರುವುದರಿಂದ ಸಮಯದಲ್ಲಿ ಶಿಕ್ಷಕರು ತಯಾರಿಸಿಕೊಳ್ಳಬಹುದು.

v ದೂರದರ್ಶನ ವೀಕ್ಷಣೆ : ಶಿಕ್ಷಕರು ದೂರದರ್ಶನ ವೀಕ್ಷಣೆಯಿಂದ ಕೋವಿಡ್ 19 ಸೋಂಕು ಹರಡುವಿಕೆ ಮತ್ತು ಮುಂಜಾಗ್ರತೆ ಕ್ರಮಗಳನ್ನು ತಿಳಿದುಕೊಂಡು ವಿದ್ಯಾರ್ಥಿಗಳಿಗೆ ತಿಳಿಸಬಹುದು.  ನಂತರ ಡಿಡಿ ಚಂದನದಲ್ಲಿ ಪ್ರಸಾರವಾಗುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ರಸಪ್ರಶ್ನೆ ಕಾರ್ಯಕ್ರಮ, ಐತಿಹಾಸಿಕ ಸ್ಥಳಗಳ ಮಾಹಿತಿ ಇವುಗಳನ್ನು ವೀಕ್ಷಿಸಿ ತಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು, ಸೇತು ಬಂಧ ಕಾರ್ಯಕ್ರಮ ವೀಕ್ಷಿಸಬಹುದು.

v ಪುಸ್ತಕ ಅಧ್ಯಯನ : ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಅಧ್ಯಯನ ಮಾಡಬಹುದು.  ಮೌಲ್ಯಯುತ ಜೀವನ ನಡೆಸಲುಕರುಣಾಳು ಬಾ ಬೆಳಕೆ ಸರಣಿ ಪುಸ್ತಕ ಓದುವುದರಿಂದ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಬಹುದು.  ದೇಶ ಸುತ್ತು ಕೋಶ ಓದು ಎಂಬ ಗಾದೆಮಾತಿನಂತೆ ದೇಶ ಸುತ್ತಲು ಈಗ ಆಗದು ಆದರೆ ಕೋಶ ಓದಲು ಸಾಕಷ್ಟು ಸಮಯವಿರುವುದರಿಂದ ಶಿಕ್ಷಕರು ಸದಾ ಕ್ರಿಯಾಶೀಲ ಓದುಗಾರರಾಗಬೇಕು.

ಒಟ್ಟಾರೆ ಬೇರೆ ಬೇರೆ  ಚಟುವಟಿಕೆಗಳಲ್ಲಿ ಶಿಕ್ಷಕರು ತೊಡಗುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಒಂದು ಉತ್ತಮ ದೇಶ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಕಾರಣಿಕರ್ತರಾಗೋಣ.